Saturday 22 December 2018

ಕಾಡುವ ಕಶೀರ...

ಅಬ್ಬಾ! ಇದು ಆ ಪುಸ್ತಕವನ್ನೋದಿದ ನಂತರ ಬರುತ್ತಿರುವ ಎಷ್ಟನೇ ಉದ್ಗಾರವೋ, ಎಷ್ಟನೇ ನಿಟ್ಟುಸಿರೊ ಕಾಣೆ. ಇಡೀ ದೇಶವನ್ನೇ ದಹಿಸುತ್ತಿರುವ ಜ್ವಲಂತ ಸಮಸ್ಯೆಯೊಂದರ ಕುರಿತು ಹೀಗೂ ಬರೆಯಬಹುದೇ ಎಂಬ ಸಾಧ್ಯತೆಯನ್ನು ಅರಿಯಬೇಕಾದರೆ ಈ ಪುಸ್ತಕವನ್ನೊದಲೇ  ಬೇಕು.  ಸಾಮಾನ್ಯ ಭಾರತೀಯರಾದ ನಾವು ಕಾಶ್ಮೀರ ಭಾರತದ ಮುಕುಟ ಮಣಿ, ತಾಯಿ ಶಾರದೆ ಕಾಶ್ಮೀರ ಪುರವಾಸಿನಿ ಅಂತ ಮಕ್ಕಳಿಗೆ ಉರು ಹೊಡೆಸಿದ್ದಷ್ಟೇ ಲಾಭ, ಈಗಂತೂ ಮಕ್ಕಳಿಗೆ ಸಿ.ಬಿ. ಎಸ್ ಸಿ ಓದಿಸಬೇಕೋ ಅಥವಾ ಐ ಸಿ ಎಸ್ ಸಿ ಓದಿಸಬೇಕೋ ಎಂಬ ಜಿಜ್ಞಾಸೆಯಲ್ಲೇ ಭಾರತೀಯ ಮಾತಾ ಪಿತರ ಚಿಂತೆಯೆಲ್ಲಾ ಕಳೆದು ಹೋಗಿರುತ್ತೆ. ಇನ್ನು ಎಲ್ಲೋ ದೂರದಲ್ಲಿರುವ ಕಶ್ಮೀರದ ಜನ ಅನುಭವಿಸುತ್ತಿರುವ ನೋವು ಯಾತನೆಯ ಕಥೆ ಅರಿತು ನಮಗೇನಾಗಬೇಕಾಗಿದೆ ಎಂಬ ಉದಾಸೀನ ನಮ್ಮಲ್ಲಿ. ಇಂದು ಅವರಿಗೆ ಒದಗಿರುವ ಸ್ಥಿತಿ, ನಮ್ಮ ಆಲಸ್ಯ ಹೀಗೆ ಇದ್ದರೆ ಕೆಲವೇ ದಿನಗಳಲ್ಲಿ ನಮಗೂ ಆವರಿಸಿಕೊಳ್ಳುತ್ತದೆಂಬ ಸಣ್ಣ ತಿಳುವಳಿಕೆ, ನಮ್ಮ ಮಕ್ಕಳಿಗೂ ದೇಶದ ಆಗು ಹೋಗುಗಳ ಕುರಿತು ಅರಿವು ಮೂಡಿಸಬೇಕೆಂಬ ಎಚ್ಚರ ನಮ್ಮಲ್ಲಿ ಮೂಡಲು ಇನ್ನೂ ಎಷ್ಟು ಕಾಲ ಸವೆಯಬೇಕೋ ?

ಇಂತಹ ಎಚ್ಚರಿಕೆಯ ಕರೆಘಂಟೆಯನ್ನು ಸಮರ್ಥವಾಗಿಯೇ ಬಾರಿಸುತ್ತಿದೆ ಈ ಕಾದಂಬರಿ. ಶಂಕರಾಚಾರ್ಯರಿಂದ ಪ್ರಾರಂಭವಾಗಿ, ಮುಫ್ತಿ ಲತೀಫರೊಂದಿಗೆ ಮುಗಿಯುವ ಕಶೀರದ ಇಂಚಿಂಚೂ ಕಶ್ಮೀರದ ನೋವನ್ನು, ಅದರ ಒಡಲಾಳದ ಬೇಗುದಿಯನ್ನು ಕನ್ನಡಿಯಂತೆ ಹಿಡಿದು ತೋರಿಸುತ್ತದೆ. ಕಾಲ್ಪನಿಕ ಪಾತ್ರಗಳ ಕಾದಂಬರಿ ರೂಪದಲ್ಲಿದ್ದರೂ ಮಂಡಿಸಲಾಗಿರುವ ವಿಷಯಗಳೆಲ್ಲ ಅಕ್ಷರಶಃ ವಾಸ್ತವ. ಒಬ್ಬ ಭಾರತೀಯನಾಗಿ ಈ ಕಾದಂಬರಿಯನ್ನೋದಿದರೆ ನಾವೇಕೆ ಹೀಗೇ ನಿರ್ವೀರ್ಯರಂತೆ ನಡೆದುಕೊಳ್ಳುತ್ತಿದ್ದೇವೆ ಎಂಬ ಭಾವ ಆವರಿಸಿ, ಮನಸ್ಸೆಲ್ಲ ತಲ್ಲಣಗೊಳ್ಳುತ್ತದೆ. ಕಾದಂಬರಿ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಓದಿ ಮುಗಿಸಿದ ಮೇಲೆ , ವೈಯಕ್ತಿಕವಾಗಿ ನನಗೆ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದೇ ಸುಳ್ಳೇನೋ ಈಗಲೂ ನಾವೆಲ್ಲಾ ಭಯದ ಕರಿ ನೆರಳಲ್ಲೇ ಜೀವಿಸುತ್ತಿದ್ದೇವೇನೋ, ಇಂದು ಕಾಶ್ಮೀರಕ್ಕೆ ಒದಗಿರುವ ಸ್ಥಿತಿ ಇನ್ನು ಕೆಲವೇ ದಿನಗಳಲ್ಲಿ ನಮ್ಮ ರಾಜ್ಯಗಳಿಗೂ ವಿಸ್ತರಿಸಿ, ನಾವೆಲ್ಲಾ ಚದುರಿ ಬದುಕೋಕೆ ಸ್ಥಳವಿಲ್ಲದೇ ಪರದಾಡಬೇಕಾದ ಸ್ಥಿತಿ ಬರುತ್ತದೇನೋ ಎಂಬಂತೆ ಭಾಸವಾಗುತ್ತಿದೆ. ನನ್ನ ಭೀತಿಗೆ ಪೂರಕವಾಗಿ ನಿತ್ಯವೂ ಪತ್ರಿಕೆಗಳಲ್ಲಿ ಓದುತ್ತಿರುವ ಶಬರಿಮಲೆಯ ಗಲಭೆ, ಮಲಬಾರ್ ನಲ್ಲಿ ಧರ್ಮಾಧಾರಿತ ಪ್ರತ್ಯೇಕ ರಾಜ್ಯದ ಬೇಡಿಕೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅನಾಚಾರದ ಸುದ್ದಿಗಳು, ಅಸ್ಸಾಮ್ ಆಕ್ರಮಿಸಿಕೊಂಡಿರುವ ರೋಹಿಂಗ್ಯಾ, ತೆಲಂಗಾಣದ ಧರ್ಮಾಧಾರಿತ ಓಲೈಕೆ ಎಲ್ಲವೂ ತಲೆಯಲ್ಲಿ ಕಲಸುಮೇಲೋಗರವಾಗಿ, ನಮ್ಮ ಜನರಿಗೆ ಇನ್ನೂ ಯಾವ ಕಾಲಕ್ಕೆ ಬುದ್ಧಿ ಬರೋದು ಎಂಬ  ತೊಳಲಾಟ ಮೂಡುತ್ತಿದೆ. ಇದುವರೆಗೂ ನಾವು ಭಾರತ ದೇಶವಾಸಿಗಳು ಕಳೆದಿರುವ ನಲಿವಿನ ಸ್ವಾತಂತ್ರ್ಯದ ದಿನಗಳು, ನಮ್ಮ ಅಭಿವೃದ್ಧಿ, ಒಂದು ದೇಶವಾಗಿ ನಾವು ಸಂಘಟಿತರಾಗಿ ಪ್ರಪಂಚದೆದುರು ಬೆಳೆದು ನಿಂತಿರುವ ಪರಿ ಎಲ್ಲ ಎಲ್ಲವೂ ಮಿಥ್ಯ. ಕಶೀರದ ಜನ ಅನುಭವಿಸಿದ ನೋವು ಸಂಕಟ ನಮ್ಮನ್ನೂ ಹೊರತುಪಡಿಸಿಲ್ಲ, ಅಪಾಯದ ತೂಗುಕತ್ತಿ ನಮ್ಮೆಲ್ಲರ ತಲೆಯ ಮೇಲೂ ಇದೆ ಎಂಬುದು ಮಾತ್ರ ಶಾಶ್ವತ ಸತ್ಯ. 

ಕಶ್ಮೀರದ ಮೂಲ ನಿವಾಸಿಗಳಿಗೆ ನ್ಯಾಯ ಒದಗಿಸು ಭಗವಂತ. ಅವರಿಗೆ ಒದಗಿರುವ ಸ್ಥಿತಿ ನಮ್ಮ ದೇಶದ ಅಥವಾ ಪ್ರಪಂಚದ ಇನ್ನ್ಯಾವುದೇ ಭಾಗಕ್ಕಾಗಲೀ ಬಾರದಿರಲಿ. ಎಲ್ಲವನ್ನೂ ಎದುರಿಸುವ ತೇಜಸ್ಸನ್ನು ನಮ್ಮ ಜನತೆ ಪಡೆಯಲಿ. 

ಸಹನಾ ಮ್ಯಾಡಮ್, ನಿಮ್ಮ ಧೈರ್ಯ, ಶ್ರದ್ಧೆ, ಸತ್ಯನಿಷ್ಠೆಗೊಂದು ದೊಡ್ಡ ಸೆಲ್ಯೂಟ್ . ಅದರಲ್ಲೂ ಆರತಿ ಕೌಲ್ ಹಾಗೂ ಕೈಲಾಶ್ ಪಂಡಿತರ ಅಧ್ಯಾಯವಂತೂ ಮನಸ್ಸನ್ನು ಬಹಳ ಕಾಡುತ್ತಿದೆ. ನಿಮ್ಮ ನಿರೂಪಣೆಗೆ ನನ್ನದೊಂದು ವಂದನೆ. 




Friday 21 December 2018

ಯಾವುದು ಸತ್ಯ?

ಯಾವುದು ಸತ್ಯ?
ದಿನವೂ ನೋಡುವ ಅದೇ ನದಿ,
ಆದರೆ ನೆನ್ನೆಯಿದ್ದ ನೀರು ಇಂದಿಲ್ಲ,
ಇಂದಿರುವುದು ನಾಳೆ ಇರುವುದಿಲ್ಲ. 
ಹಾಗಾದರೆ ಹೆಸರಿಡುವುದು ನೀರಿನ ಹರಿವಿಗೋ?
ಅಥವಾ ಹರಿವ ಪಾತ್ರಕ್ಕೋ? ಯಾವುದು ನದಿ?
ಎಂದೋ ಯಾರೋ ಕಟ್ಟಿದ ಕಟ್ಟಡ,
ಕಟ್ಟಿದವನೊಬ್ಬ, ಕೆಡವಿ ಮತ್ತೆ ಕಟ್ಟಿದವನಿನ್ನೊಬ್ಬ,
ಅದು ನಮ್ಮದೆಂದು, ಇಲ್ಲ ನಮ್ಮದಾಗಿತ್ತೆಂದು
ಜನಾಂಗಗಳ ನಡುವೆ, ತಲೆಮಾರುಗಳವರೆಗೆ ಕಾದಾಟ!!
ಯಾರದಾದರೇನು, ನಮ್ಮದೆಂದು ಭಾವಿಸಿ ನಮಿಸಲಾಗದೇ?
ಹಾಗಾದರೆ ಪ್ರೀತಿ ಕಟ್ಟಡದ ಮೇಲೋ?ಅಥವಾ
ನಮ್ಮದನ್ನೇ ಸ್ಥಾಪಿಸಿದೆವೆಂಬ ಅಹಂಕಾರದ ಮೇಲೋ? ಯಾವುದು ಗುಡಿ?
ಪಾತ್ರಕ್ಕಷ್ಟೇ ಹೆಸರು. ಅಂತಃ ಸತ್ವಕ್ಕಲ್ಲ.
ಇಂದು ಶಾಂತಿ ಮಂತ್ರ ಸಾರಿ, ನಾಳೆ
ದೊಂಬಿ ಹಿಂಸೆ ಮಾಡಿದರೂ ಅವನ ಹೆಸರು ಒಂದೇ.
ಹೆಸರಿಡುವುದು ಅವನ ದೇಹಕ್ಕೆ, ಬದಲಾಗುತ್ತಿರುವ
ಅವನೊಳಗಿನ ಮನುಷ್ಯನಿಗಲ್ಲ.
ಕಾಣುವ ಪಾತ್ರ -ನದಿ!
ನೋಡಬಲ್ಲ ಕಟ್ಟಡ - ಗುಡಿ !
ಕಣ್ಣೆದುರಿರುವ ದೇಹವೇ - ಮನುಷ್ಯ!
ಹಾಗಿದ್ದರೆ ಯಾವುದು ಸತ್ಯ?

Tuesday 13 June 2017

ಜಿಂದಗಿ ಜೀನೇಕಾ ತರೀಖ

ಬಷೀರ್ ಚಿಂತಿಸುತ್ತಲೇ ಇದ್ದ. ಇತ್ತೀಚಿಗೆ ಪದೇ ಪದೇ ಅವನಿಗೆ ಬೀಳುತ್ತಿರುವ ಕನಸು ಅವನ ಆಲೋಚನೆಯ ಪರಿಧಿಗೇ ನಿಲುಕುತ್ತಿರಲಿಲ್ಲ. ಅವನ ಚಿಂತನೆಯನ್ನೆಲ್ಲ ತಲೆಕೆಳಗು ಮಾಡಿ, ಸಿಟ್ಟು ಅಸಹನೆಯಿಂದ ಕುದಿಯುವಂತೆ ಮಾಡುತ್ತಿತ್ತು. ಅಬ್ಬು ಯಾಕೆ ಹೀಗೆಲ್ಲ ಹೇಳುತ್ತಿದ್ದಾರೆ? ಅಲ್ಲ, ಅಷ್ಟಕ್ಕೂ ಅಬ್ಬು ನಿಜವಾಗಿಯೂ ಹಾಗೆಲ್ಲ ಹೇಳಿದರೋ? ಅಥವಾ ಇದೆಲ್ಲ ತನ್ನ ಭ್ರಮೆಯೋ ಎಂಬುದೇ ಅವನ ಮುಂದಿದ್ದ ದೊಡ್ಡ ಪ್ರಶ್ನೆ. ನೀವೇ ಹೇಳಿ, ತನ್ನ ಮೊದಲ ಹೆಂಡತಿ ನಾಲ್ಕು ಮಕ್ಕಳಾದರೂ ಗಂಡು ಮಗು ಹೆರಲಿಲ್ಲ ಎಂದು ಮುಲಾಜಿಲ್ಲದೇ "ತಲಾಖ್ ತಲಾಖ್ ತಲಾಖ್" ಎಂದು ಘೋಷಿಸಿದ್ದ ಅವನ ಅಬ್ಬಾಜಾನ್, ಬಷೀರ್ ನ ಅಮ್ಮಿ ಗಂಡ ಮತ್ತೊಂದು ಸಂಬಂಧ ಇಟ್ಟುಕೊಂಡದ್ದನ್ನು ವಿರೋಧಿಸಿದಾಗ ಮುಲಾಜಿಲ್ಲದೇ ಅವಳನ್ನು ತವರಿಗಟ್ಟಿದ್ದ ಅಬ್ಬಾಜಾನ್, ಕಾಫೀರ್ ರನ್ನು ನಾಶ ಮಾಡಿದರೆ ಕರುಣಾಳುವಾದ ಅಲ್ಲಾಹ್ ಸ್ವರ್ಗದಲ್ಲಿ ತಮಗೆ 72 ಕನ್ಯೆಯರನ್ನು ಕೊಟ್ಟು ಸುಖವಾಗಿ ನೋಡಿಕೊಳ್ಳುತ್ತಾನೆ ಎಂದು ಸದಾ ಹೇಳುತ್ತಾ, ಅಲ್ಲಾಹುವಿನ ಸಂದೇಶಗಳನ್ನು ಪ್ರಪಂಚಕ್ಕೆಲ್ಲ ಸಾರಿ, ಕಾಫೀರ್ ರನ್ನು ನಾಶಮಾಡುವ ಪವಿತ್ರ ಕೆಲಸಕ್ಕೆ ತನ್ನನ್ನು ನಿಯೋಜಿಸಿದ್ದ ಅಬ್ಬಾಜಾನ್, ತಾವು ಸತ್ತ ಒಂದು ವರ್ಷದ ನಂತರ ಪದೇ ಪದೇ ಕನಸಲ್ಲಿ ಬಂದು, ಹೀಗೆ ಏಕಾಏಕಿ ತಮ್ಮೆಲ್ಲ ನಂಬಿಕೆಗಳನ್ನೂ ಬುಡಮೇಲು ಮಾಡುವಂತೆ ಮಾತಾಡಿದರೆ?? ಅವನು ಹೇಗೆ ತಾನೇ ನಂಬಿಯಾನು.
ಫರೀದಾ ಬೇಗಂ ಬೆಳಗಿನಿಂದ ತನ್ನ ಗಂಡನ ಚಲನವಲನಗಳನ್ನು ಗಮನಿಸುತ್ತಲೇ ಇದ್ದಾಳೆ. ಅವಳಿಗೆ ಬೇರೇನೂ ಅರ್ಥವಾಗದಿದ್ದರೂ ಗಂಡ ಇತ್ತೀಚಿಗೆ ಎಂದಿನಂತಿಲ್ಲ ಎಂಬುದನ್ನು ಮಾತ್ರ ಅರ್ಥ ಮಾಡಿಕೊಂಡಿದ್ದಾಳೆ. ಮನಸ್ಸಿಗೆ ಯಾವುದಾದರೂ ವಿಷಯ ಹೊಕ್ಕರೆ ಸಾಕು, ಅದು ಅವನಿಗೆ ಕನಸಾಗಿಯೂ ಕಾಡುವುದು ಅವಳಿಗೇನು ಹೊಸದೇ?? ಆದರೂ ತಾನಾಗಿಯೇ ಕೇಳಿ ಅವನ ಕೈಲಿ ಯಾಕೆ ಬೈಸಿಕೊಳ್ಳುವುದು? ಅವನೇ ಹೇಳಿದರೆ ಹೇಳಲಿ ಎಂದು ತನ್ನ ಯಾವೊತ್ತಿನ ಸಂಗಾತಿ ಮೌನಕ್ಕೆ ಶರಣಾಗಿದ್ದಾಳೆ. ಇವನೂ ಚಿಂತಿಸಿ, ಚಿಂತಿಸಿ ಸಾಕಾಗಿ ಕೊನೆಗೆ ಅವಳನ್ನು ಈ ಕುರಿತು ಒಂದು ಮಾತು ಕೇಳೋಣ. ಆ ಮಡ್ಡು ತಲೆಗೆ ಏನಾದರೂ ಹೊಳೆದರೆ ಹೇಳಲಿ ಎಂದುಕೊಂಡು, "ಫರೀದಾ, ಏ ಫರೀದಾ, ಆ ಇಧರ್" ಎಂದು ಕೂಗಿಕೊಂಡ. ಅವನ ಧ್ವನಿಯಲ್ಲಿನ ಕೋಪ, ಅಸಹನೆ ಗುರುತಿಸಿ, ಇವತ್ತೇನೋ ಗ್ರಹಚಾರ ಕಾದಿದೆ ಎಂದುಕೊಂಡು ಇವಳು ಸ್ವಲ್ಪ ಗಾಬರಿಯಲ್ಲೇ ಓಡಿದಳು. "ಫರೀದಾ ಅಗರ್ ಹಮ್ ಕಾಫಿರ್ ಲೋಗೋಂ ಕೋ ಮಾರೇಂಗೆ ತೊ, ಕ್ಯಾ ಖುದಾ ಹಮೇ ಖುಶ್ ನಹೀ ರಖೇ೦ಗೆ? ಅಚಾನಕ್ ಆಗಿ ಬಂದ ಅವನ ಈ ಪ್ರಶ್ನೆ ಇವಳನ್ನು ದಂಗು ಬಡಿಸಿತು. ಜೀ ಅಬ್ ಕ್ಯಾ ಹುವಾ ಎಂದಳು. ಕ್ಯಾ ಹುವಾ, ಕ್ಯಾ ನಹೀ ಹುವಾ ಅದೆಲ್ಲ ಬಿಡು. ಖುದಾ ನಮ್ಮನ್ನ ಚನ್ನಾಗಿ ನೋಡ್ಕೊಳ್ತಾನ ಇಲ್ವಾ ಅದನ್ನ ಹೇಳು ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದ. ಇವಳು ಅಷ್ಟಕ್ಕೇ ಹೆದರಿ ಅಳಲು ಶುರುವಿಟ್ಟಳು. ಬಷೀರ್ ಗೆ ಮೊದಲೇ ಅಸಹನೆ ಮೂಡಿತ್ತು. ಈಗ ಇವಳ ಅಳು ನೋಡಿ, ಕೋಪ ನೆತ್ತಿಗೇರಿ ಹೊಡೆಯಲು ಕೈ ಎತ್ತಿದ್ದವನು, "ಅಪ್ನೀ ಬೇಗಂ ಕೋ ಖುಷ್ ರಖ್ನಾ" ಎಂದ ಅಬ್ಬುವಿನ ಮಾತು ನೆನಪಾಗಿ ಎತ್ತಿದ್ದ ಕೈ ಇಳಿಸಿ ಗೊಣಗಿಕೊಂಡು ಹೊರಗೆ ಹೋದ. ಅವನಿಗೆ ಏನಾಗಿದೆ ಎಂಬುದು ಅವಳಿಗೆ ಅರ್ಥವಾಗದಿದ್ದರೂ, ಜೀನೇಕಾ ತರೀಖ ಏ ನಹೀ ಕತೆ, ಕಾಫಿರ್ ಲೋಗ್ ಯಾರಿಗೂ ತೊಂದರೆ ಕೊಡಬಾರದಂತೆ, ಎಲ್ಲಾರು ಅಲ್ಲಾಹುನ ಮಕ್ಕಳೇ ಅಂತೆ, ಯಾರನ್ನೂ ಕೊಲ್ಲಬಾರದಂತೆ, ಬೀವೀನ ಚನ್ನಾಗಿ ನೋಡಿಕೊಳ್ಳಬೇಕಂತೆ, ಅಬ್ ಇಸ್ ನಾಲಾಯಕ್ ಕೋ ಖುಷ್ ರಖ್ನಾ ಪಡೇಗಾ ಮಂಝೆ ಎನ್ನುತ್ತಾ ಹೋದ ಅವನ ಗೊಣಗುವಿಕೆ ಕೇಳಿ, ಅವಳ ಮನಸ್ಸು ಸಂತಸದಿಂದ ತುಂಬಿ ಹೋಯಿತು. ಯಾ ಖುದಾ, ತುಮ್ನೆ ಮೇರಾ ಸುನ್ಲಿಯಾ ಎನ್ನುತ್ತಾ ದೇವರಿಗೆ ಕೃತಜ್ಞತೆ ಅರ್ಪಿಸಿದಳು. 
ಸಂಜೆ ಮನೆಗೆ ಬಂದಾಗ ಯಾವಾಗಲೂ ಸಿಟ್ಟಾಗಿ, ಕುಡಿಯುತ್ತಾ, ಹೊಂಚು ಹಾಕುತ್ತಾ, ಫೋನ್ನಲ್ಲೇ ವ್ಯಸ್ತನಾಗಿರುತ್ತಿದ್ದ ಅಪ್ಪ , ಇಂದು ಸುಮ್ಮನೇ ಕುಳಿತಿರುವುದೂ ಅಲ್ಲದೇ, ತಾನು ಮನೆಗೆ ಬಂದ ತಕ್ಷಣ, "ಆರೇ ಶಾಬಾಜ್, ಆಜ್ ಕೈಸಾ ರಹಾ ಇಸ್ಕೂಲ್, ಎಂದು ಕೇಳಿದ್ದನ್ನು ನೋಡಿ ಬಷೀರ್ ನ ಮಗನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ. ಅಚ್ಛಾ ಥಾ ಅಬ್ಬು ಎನ್ನುತ್ತಾ ಓಡಿ ಬಂದು ಅವನ ತೋಳ ತೆಕ್ಕೆ ಸೇರಿದ. ತನ್ನ ಒಂದು ಮಾತಿನಿಂದ ಮಗನಿಗೆ ಅಷ್ಟೊಂದು ಸಂತಸವಾಗಬಹುದೆಂದು ಎಣಿಸಿರದಿದ್ದ ಬಷೀರ್ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಬ್ಬಾಜಾನ್ ಆಪ್ ಆಜ್ ತಕ್ ಜೋ ಮೇರೇ ಸಪ್ನೆ ಮೇ ಆಕೆ ಬೋಲ್ತೇ ಥೇ ವೋ ಸಹೀ ಥಾ. ನಾನ್ ಇನ್ನುಮುಂದೆ ನನ್ನ ಹೆಂಡತಿ ಮಗನನ್ನು ಚನ್ನಾಗಿ ಇಟ್ಟುಕೊಳ್ಳುತ್ತೇನೆ. ನನ್ನ ಮಗ ತಪ್ಪು ಹಾದಿ ಹಿಡಿಯಲು ಬಿಡುವುದಿಲ್ಲ ಎಂದು ಗಟ್ಟಿಯಾಗಿಯೇ ಹೇಳಿದ. ಫರೀದಾ ಆ ಮಾತು ಕೇಳಿ ಮೊದಲ ಬಾರಿ ತನ್ನ ಮಾವನಿಗೆ ಮನಃ ಪೂರ್ವಕವಾಗಿ ವಂದಿಸುತ್ತಿದ್ದರೆ, ಶಾಬಾಜ್ ತನ್ನ ತಂದೆಯಲ್ಲಿ ಈ ಅಭೂತ ಪೂರ್ವ ಬದಲಾವಣೆ ಬರುವಂತೆ ಅಪ್ಪನ ಮನಸ್ಸನ್ನು ತಿದ್ದಿದ, ಅಪ್ಪನಿಗೆ ಇನ್ನಿಲ್ಲದಂತೆ ತಿಳಿಸಿ ಹೇಳಿ, ಬಹುಶಃ ಕನಸು ಬೀಳಲು ಪರೋಕ್ಷ ಕಾರಣರಾದ ತನ್ನ ಮೇಷ್ಟ್ರಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದ. 

Note: ಇದು ನನ್ನ ಮೊದಲ ಪ್ರಯತ್ನ. ಮನಸ್ಸಿನಲ್ಲಿ ಬಹಳ ಕಾಡಿಸುತ್ತಿದ್ದ ವಸ್ತುವನ್ನು ಕಥೆಯಾಗಿಸಲು ಪ್ರಯತ್ನಿಸಿದ್ದೇನೆ. ತುಂಬಾ ಬಾಲಿಶ ಎನಿಸಬಹುದೇನೋ, ಯಾವುದೇ ವ್ಯಕ್ತಿಗೆ ಅಥವಾ ಧರ್ಮಕ್ಕೆ ನೋವುಂಟು ಮಾಡುವ ಉದ್ದೇಶ ಖಂಡಿತ ಇಲ್ಲ. 

Monday 30 May 2016

ಕೇಳುವ ಕಿವಿ ಸತ್ತು ಹೋದರೆ ಆಡುವ ಬಾಯಿಯೂ ಸತ್ತು ಹೋಗುತ್ತದಂತೆ.

ಹಾಗೆಂದು ಎಲ್ಲೋ ಕೇಳಿದ್ದೆ. ಕೇಳುವ ಕಿವಿ ಸತ್ತು ಹೋದರೆ ಆಡುವ ಬಾಯಿಯೂ ಸತ್ತು ಹೋಗುತ್ತದಂತೆ. ನಮ್ಮ ಮಾತನ್ನು ಕೇಳುವ, ನಾವು ಓದಿದ, ತಿಳಿದ ವಿಷಯಗಳನ್ನು ಕೇಳಿ, ಸಂತಸದಿಂದ ಮುಖ ಅರಳಿಸಿ, ತಲೆ ನೇವರಿಸಿ, ಬೆನ್ನು ತಟ್ಟಿ ಖುಷಿ ಪಡುವ ಜೀವವೊಂದು ಬಳಿಯಲ್ಲಿದ್ದರೆ ಹೊಸಹೊಸತನ್ನು ಕಲಿಯುವ, ಓದುವ, ಓದಿ ಮತ್ತೊಬ್ಬರಿಗೆ ಹೇಳುವ ಹುಮ್ಮಸ್ಸು ನೂರ್ಮಡಿಗೊಳ್ಳುತ್ತದೆ. ನಾವು ಏನೇ ಹೇಳಿದರೂ ಕೇಳುವ ಜೀವವೊಂದು ಇದೆ ಎನ್ನುವ ಅರಿವೇ ನಮ್ಮನ್ನು ವಿನೂತನ ಸಾಹಸಗಳಿಗೆ ಅಣಿಯಾಗಲು, ಇನ್ನೂ ಏನನ್ನೋ ಕಲಿಯಲು ಹುರಿದುಂಬಿಸುತ್ತದೆ. ಮನಸ್ಸು ಖುಷಿಯಿಂದ ಪುಟಿಯುತ್ತದೆ. 

ನನ್ನ ಬಳಿಯೂ ಅಂತಹ ಒಂದು ಜೀವವಿತ್ತು. ನಾನು ಏನೇ ಹೇಳಿದರೂ ಮಗುವಿನಷ್ಟೇ ಮುಗ್ಧತೆಯಿಂದ ಎಲ್ಲವನ್ನೂ ಕೇಳಿ, ಎಷ್ಟು ತಿಳಿದುಕೊಂಡಿದ್ದೀಯಮ್ಮ ಎಂದು ತಲೆ ಆಡಿಸುತ್ತಾ, ನೋಡಿದ್ಯೇನೇ? ನಮ್ಮ ಅಮ್ಮು ಹೇಗೆ ಎಲ್ಲ ಹೇಳುತ್ತಾಳೆ ನೋಡು ಎಂದು ಸಂಭ್ರಮಿಸುತ್ತಾ, ನಮ್ಮ ಅಮ್ಮುಗೆ ಅದು ಗೊತ್ತು, ನನ್ನ ಮಗಳು ಇದರ ಬಗ್ಗೆ ಚೆನ್ನಾಗಿ ತಿಳಿದಿದ್ದಾಳೆ ಎಂದು ಎಲ್ಲರ ಬಳಿ  ಹೇಳಿಕೊಂಡು ಓಡಾಡುತ್ತಾ ಸಂತಸಪಡುತ್ತಿದ್ದ ಜೀವ. ನನ್ನೆಲ್ಲ ಕೆಲಸಗಳಿಗೆ ಆಸರೆಯಾಗಿ, ಹುರಿದುಂಬಿಸುತ್ತಾ ನನ್ನ ಬೆನ್ನೆಲುಬಾಗಿದ್ದ ಜೀವ. ನಾನು ಪದೇ ಪದೇ ಪುಸ್ತಕಗಳನ್ನು ಕೊಳ್ಳುವಾಗ ಯಾಕೆ ಹಣ ಹಾಳು ಮಾಡುತ್ತೀಯ ಎಂದು ಗದರಿಕೊಳ್ಳಲಿಲ್ಲ, ನಾನು ದುಡಿಯುತ್ತ, ಓದುತ್ತ ನನ್ನ  ಪಾಡಿಗೆ ನಾನು ಓಡಾಡುತ್ತಿದ್ದರೂ ಮನೆಗೆ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಲಿಲ್ಲ. ನಾನು ಏನೇ ಕೇಳಿದರೂ ಇಲ್ಲ ಅನ್ನಲಿಲ್ಲ, ನನ್ನಿಂದ ಯಾವುದೇ ನಿರೀಕ್ಷೆಗಳಿರಲಿಲ್ಲ. ನಾನು ಓದಿ- ತಿಳಿದ ವಿಷಯಗಳನ್ನು ಅವರಿಗೆ ಹೇಳುತ್ತಿದ್ದರೆ ಅದೇ ಅವರಿಗೆ ದೊಡ್ಡ ಖುಷಿ. ಅದನ್ನು ಊರ ತುಂಬಾ ಹೇಳಿಕೊಂಡು ಓಡಾಡಬೇಕು. 

ನಮ್ಮಣ್ಣ ಯಾವಾಗಲೂ ಹಾಗೇ. ಯಾವುದೇ ವಿಷಯವಿರಲಿ, ಸಂತಸ ಪಡುವಂಥದ್ದಾದರೆ ನಗುನಗುತ್ತಾ ಎಲ್ಲರ ಬಳಿ ಹೇಳಿಕೊಳ್ಳಬೇಕು. ಅದು ಒಡಹುಟ್ಟಿದ ತಮ್ಮನೇ ಆಗಿರಲಿ, ಅಥವಾ ಈಗ ತಾನೇ ಪರಿಚಯವಾದ ಆಟೋ ಡ್ರೈವರೇ ಆಗಿರಲಿ, ಅವರು ಏನು ತಿಳಿಯುತ್ತಾರೆ ಎಂಬುದನ್ನೂ ಯೋಚಿಸದೇ ಎಲ್ಲರ ಬಳಿಯೂ ಹೇಳಿಕೊಳ್ಳುತ್ತಾ ಬರುತ್ತಿದ್ದರು. ಅದು ಬರೀ ಮಕ್ಕಳ ಬಗ್ಗೆ ಹೇಳಿಕೊಳ್ಳುವುದಕ್ಕಷ್ಟೇ ಸೀಮಿತವಲ್ಲ. ವಿಷಯ ಯಾವುದೇ ಇರಲಿ, ಯಾರನ್ನಾದರೂ ಕ್ಷೇಮ ವಿಚಾರಿಸುವುದಾದರೂ ಸೈ. ಇವರು ಊರಗಲ ಮುಖ ಅರಳಿಸಿ, ನಗುತ್ತಾ ಆರೋಗ್ಯಾನ ಸ್ವಾಮಿ ಎಂದು ಮಾತನಾಡಿಸಿದರೆ, ಎದುರಿರುವ ಮನುಷ್ಯ ಎಷ್ಟೇ ಕೋಪದಿಂದ ಸೆಟೆದುಕೊಂಡಿದ್ದರೂ, ಬಲವಂತದ ಮುಗುಳ್ನಗೆಯನ್ನು ತಂದುಕೊಂಡು ಉತ್ತರಿಸಲೇ ಬೇಕು ಹಾಗೆ ಮಾಡುತ್ತಿದ್ದರು. ನನ್ನ ಮಾತುಗಳನ್ನು ಬೇರೆ ಯಾರು ಕೇಳದಿದ್ದರೂ, ಅವರಿದ್ದಾರಲ್ಲ, ಅವರೊಬ್ಬರಿಗಾಗಿ ಹೊಸ ಹೊಸ ವಿಷಯಗಳನ್ನು ತಿಳಿಯಬೇಕು, ಇನ್ನೂ ಹೆಚ್ಚು ಓದಿ ಹೇಳಬೇಕೆಂಬ ಉತ್ಸಾಹ ನನ್ನಲ್ಲಿ ತಾನೇ ತಾನಾಗಿ ಮೂಡುತ್ತಿತ್ತು. 

ಕಳೆದ ವರ್ಷ ಕಲಾಂ ಸರ್ ಹೋದಾಗ ಮನಸ್ಸು ಖಿನ್ನಗೊಂಡಿತ್ತು. ಅವರ ಕುರಿತು ನನ್ನ ಬಾಲಿಶ ಬರವಣಿಗೆಯಲ್ಲಿ ಬರೆಯುವಾಗ, ಇನ್ನು ನಾಲ್ಕು ತಿಂಗಳಲ್ಲಿ ಇದಕ್ಕಿಂತ ದೊಡ್ಡ ಆಘಾತ ಕಾದಿದೆಯೆಂದು ಕನಸು ಮನಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ಹುಟ್ಟು - ಸಾವು ಎರಡನ್ನೂ ಕಣ್ಣಾರೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೋಡುತ್ತೇನೆಂದೂ ನೆನೆಸಿರಲಿಲ್ಲ. ನನ್ನ ಮಗ ಹುಟ್ಟಿದ ಸಡಗರವಿನ್ನೂ ಮುಗಿದಿರಲೇ ಇಲ್ಲ. ಮೊಮ್ಮಗು ಬರುತ್ತದೆಂದು ಅಷ್ಟೆಲ್ಲ ಸಂಭ್ರಮದಿಂದ ತಯಾರಿ ನಡೆಸಿದ್ದ ನಮ್ಮಣ್ಣ, ಕೇವಲ ಇಪ್ಪತ್ನಾಲ್ಕೇ  ದಿನಗಳಿಗೆ ಮೊಮ್ಮಗನ ಋಣ ಹರಿದುಕೊಂಡು ಹೊರಟೇಬಿಟ್ಟರು.  ಚಿಕ್ಕ ಸುಳಿವೂ ಕೊಡದೆ, ಉಳಿಸಿಕೊಳ್ಳಲು ಅವಕಾಶವನ್ನೇ ನೀಡದೆ ನನ್ನಿಂದ ದೂರ ಸರಿದರು. ಆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಲಾರದ ನನ್ನ ಅಸಹಾಯಕತೆ ಅವರನ್ನು ಉಳಿಸಿಕೊಳ್ಳಲು ಇರಬಹುದಾಗಿದ್ದ ಒಂದೇ ಒಂದು ಚಿಕ್ಕ ಸಾಧ್ಯತೆಯನ್ನೂ ಅಳಿಸಿಹಾಕಿತು. 

ನನ್ನ ಮಗನಿಗೀಗ ಆರೂವರೆ ತಿಂಗಳು. ಅಣ್ಣ ಹೋಗಿ ಆರು ತಿಂಗಳು ಸಂದು ಹೋದವು. ಆದರೆ ಈಗಲೂ ನಡೆದದ್ದನ್ನೆಲ್ಲ ನೆನೆಸಿಕೊಂಡರೆ, ಅಣ್ಣ ಹೋದ ದಿನದ ಘಟನೆಗಳು ಹಸಿ ಹಸಿಯಾಗಿ ಮನಸ್ಸಿನ ಪದರದ ಮೇಲೆ ಮೂಡುತ್ತವೆ. ಇನ್ನೂ ಇಲ್ಲೇ ಎಲ್ಲೋ ಇದ್ದಾರೆಂಬ ಭಾವ ಮನಸ್ಸನ್ನು ತುಂಬಿಕೊಳ್ಳುತ್ತದೆ. ನಾನು ಅಮ್ಮನಿಗೆ ಕರೆ ಮಾಡಿದಾಗಲೆಲ್ಲ ಮೊದಲು ಫೋನ್ ಎತ್ತಿಕೊಂಡು " ಹಲೋ... ಏನ್ರೀ, ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಯಾವಾಗ ನೋಡಿದ್ರೂ ಫೋನ್ ಮಾಡ್ತಾನೇ ಇರ್ತೀರಲ್ಲ??" ಎಂದು ಪ್ರತಿದಿನವೂ ರೇಗಿಸಿ, ಮತ್ತು ಪ್ರತಿ ಬಾರಿಯೂ ಹಾಗೆ ರೇಗಿಸಿದ ನಂತರ "ಅಮ್ಮು ತಪ್ಪು ತಿಳ್ಕೊಬೇಡಮ್ಮ, ಏನೋ ತಮಾಷೆಗೆ ಹಾಗೆ ಅಂತೀನಿ ಅಷ್ಟೇ. ನೀನು ನನ್ನ ಮಾತು ಕೇಳಿ ನಕ್ಕರೆ ಅಷ್ಟೇ ಸಾಕು. ಅದೇ ನನಗೆ ಒಂದು ರೀತಿ ಸಂತೋಷ" ಎಂದು ಸಮಜಾಯಿಷಿಕೊಡುತ್ತಿದ್ದ  ಅವರ ಮುಗ್ಧತೆ ಬಿಟ್ಟೂ ಬಿಡದೇ ಕಾಡುತ್ತದೆ. ಪುಟ್ಟ ಮಗ ಕೈಯಲ್ಲಿರಲಿ, ಅಥವಾ ಕಛೇರಿಯಲ್ಲೇ ಕುಳಿತಿರಲಿ, ಎಲ್ಲಿದ್ದೇನೆಂಬ ಅರಿವೂ ಇಲ್ಲದಂತೆ ಕಣ್ಣು ತುಂಬಿಕೊಳ್ಳುತ್ತದೆ. ಅವರಿಲ್ಲದ ಜಗತ್ತೇ ನನಗೆ ಇರಲಿಲ್ಲ. ಈಗ ನೆನೆಸಿಕೊಂಡರೆ ಏನೂ ಇಲ್ಲ, ಏನೂ ಬೇಡವೆಂಬ ಭಾವ ಮನಸ್ಸನ್ನು ಆವರಿಸಿಕೊಳ್ಳುತ್ತದೆ. 

ಇಗೋ ಈಗ, ಈಗಷ್ಟೇ ನಮ್ಮೆದುರು ಕುಳಿತು ಮಾತನಾಡುತ್ತಿದ್ದರು. ಇನ್ನವರು ಇಲ್ಲ ಎಂದರೆ?? ಹೇಗೆ ಅರಗಿಸಿಕೊಳ್ಳುವುದು?? ಪ್ರತೀದಿನ ದಿನಪತ್ರಿಕೆಗಳಲ್ಲಿ ಸುದ್ದಿಯನ್ನು ಓದುವಾಗ, ಚಾನಲ್ ಗಳಲ್ಲಿ ನೋಡುವಾಗ, ಅಪಘಾತ,  ಅಷ್ಟು ಸಾವು, ಇಷ್ಟು ಸಾವು ಎಂದು ಇದ್ದರೆ, ಹೃದಯಾಘಾತ ಕಣ್ಮರೆ ಎಂದೆಲ್ಲ ಇದ್ದರೆ ಛೆ, ಛೆ, ಎಂದು ಲೊಚಗುಟ್ಟಿಬಿಡುತ್ತೇವೆ. ನಮ್ಮವರು ಯಾರೋ ಹಾಗೆ ಹೋದಾಗಲೇ ಆ ನೋವಿನ ತೀವ್ರತೆ ಎಂತಹುದೆಂದು ಅರ್ಥವಾಗಬಲ್ಲುದೇನೋ. ಅಣ್ಣ ಹೋದಾಗಿನಿಂದ ನಾನು ಅಂತಹ ಸುದ್ದಿಗಳನ್ನು ನೋಡುವ ರೀತಿಯೇ ಬದಲಾಗಿದೆ. ಹಾಗೆ ಹೋದವರ ಮನೆಯವರು, ಸಂಬಂಧಿಗಳ ದುಃಖ ಎಷ್ಟಿರಬಹುದೆಂದು ಯೋಚಿಸುತ್ತಾ ಕುಳಿತು ಬಿಡುತ್ತೇನೆ. ಎಲ್ಲೋ ಒಂದುಕಡೆ ನಾವೆಲ್ಲಾ ಯಾಕೆ ಇಷ್ಟು ಒದ್ದಾಡುತ್ತೇವೆ ಎನಿಸುತ್ತದೆ. ಕೇವಲ ತಿಂಗಳ ಹಿಂದಷ್ಟೇ ನಮ್ಮ ತಂದೆ ಬಂದು ನನ್ನನ್ನು ತವರಿಗೆ ಕರೆದೊಯ್ದರು, ಮಗಳ ಬಾಣಂತನ ಮಾಡುತ್ತೇನೆಂಬ ಸಡಗರದಿಂದ. ಇನ್ನು ಒಂದು ತಿಂಗಳಲ್ಲಿ ನಾನೇ ಇರುವುದಿಲ್ಲವೆಂದು ಅವರೇನಾದರೂ ಕನಸಿದ್ದರಾ?? ಇಲ್ಲ. ನಾವೂ ಖುಷಿಯಾಗಿ ಏನೋ ಅಂದುಕೊಳ್ಳುತ್ತೇವೆ, ದುಃಖದಲ್ಲಿ ಕೊರಗುತ್ತೇವೆ, ಕೋಪದಲ್ಲಿ ಹಠ ಸಾಧಿಸುತ್ತೇವೆ, ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡಿ, ಜಗಳ ಹಚ್ಚಿಕೊಂಡು ಕೂಡುತ್ತೇವೆ. ಯಾವ ಕ್ಷಣದಲ್ಲಿ ವಿಧಿ ನಮ್ಮನ್ನು ಕರೆದೊಯ್ಯುವುದೋ ಯಾರಿಗೆ ಗೊತ್ತು?? ಇಷ್ಟೆಲ್ಲಾ ತಿಳಿದಿದ್ದರೂ ಸುಮ್ಮನೇ ಬಡಿದಾಡುತ್ತೇವೆ. 

ಅಣ್ಣ ಯಾವಾಗಲೂ ಹೇಳುತ್ತಿದ್ದರು - ಮನುಷ್ಯ ಏನೂ ತೊಗೊಂಡು ಹೋಗೋಲ್ಲ ಕಣಮ್ಮ, ಏನೋ ಒಂದು ಒಳ್ಳೇತನ, ಒಂದು ಕೆಟ್ಟತನ ಅಷ್ಟೇ. ನಾವು ಏನು ಮಾಡಿರ್ತೀವೋ ನಮಗೆ ಅದೇ ಸಿಗೋದು. ಏನೋ ಇರೋ ಅಷ್ಟು ದಿನ ನಾಲ್ಕಾರು ಜನರ ಜೊತೆ ಖುಷಿ ಖುಷಿಯಾಗಿ ಮಾತಾಡ್ತಾ, ನಗು ನಗ್ತಾ ಇದ್ರೆ ಸಾಕು. ಇನ್ನೇನ್ ಬೇಕಮ್ಮ ಮನುಷ್ಯಂಗೆ ಅಂತ. ಅವರು ಹಾಗೆ ಹೇಳುತ್ತಾ, ಅದೇ ರೀತಿ ಬಾಳಿ ತೋರಿಸಿದರು. ಈಗಿನ ವ್ಯಾವಹಾರಿಕ ಜಗತ್ತಿನಲ್ಲಿ ಅವರ ರೀತಿ ಬದುಕುವುದು ಬಹಳ ಕಷ್ಟ. ಅಷ್ಟು ಒಳ್ಳೆಯತನದಲ್ಲಿ ಬದುಕಿ, ಬೀದಿಯ ಮಕ್ಕಳನ್ನೆಲ್ಲ ಆಡಿಸಿ, ಬೆಳೆಸಿದ ನಮ್ಮಪ್ಪ ನನ್ನ ಮಗುವನ್ನ ಎತ್ತಿಕೊಳ್ಳುವ ಸಮಯಕ್ಕೆ ಇಲ್ಲ ಎನ್ನುವ ನೆನಪು ಬಂದಾಗಲೆಲ್ಲ ಸಂಕಟದಿಂದ ದುಃಖ ಉಮ್ಮಳಿಸಿ ಬರುತ್ತದೆ. ನನ್ನ ಮಾತಿಗೆ ಕಿವಿಯಾಗಿದ್ದ ಅಣ್ಣ ಇನ್ನಿಲ್ಲ, ಇನ್ನು ಯಾರಿಗಾಗಿ ಓದಲಿ ಎನಿಸುತ್ತದೆ.  ಹಾಗೇ ಮನಸ್ಸಿನ ಮೂಲೆಯಲ್ಲಿ, ಎಲ್ಲೋ ಒಂದು ಕಡೆ ಅವರ ಈ ಅನಿರೀಕ್ಷಿತ ನಿರ್ಗಮನಕ್ಕೆ ಪರೋಕ್ಷವಾಗಿ ನಾನೇ ಕಾರಣಳಾಗಿ ಬಿಟ್ಟೆನಾ?? ಎನ್ನುವುದು ಮಾತ್ರ ನಾನು ಬದುಕಿರುವವರೆಗೂ ನನ್ನನ್ನು ಕಾಡುವ ಕೊರಗು. 



Tuesday 28 July 2015

ಶೂನ್ಯ ತುಂಬಿದೆ! ಸಾಧ್ಯವಾದರೆ ಮತ್ತೆ ಬನ್ನಿ

ವಿಷನ್ ೨೦೨೦! ಭವ್ಯ ಭಾರತದ ಕನಸು! ಸಾಕಾರವಾಗುವುದನ್ನು ಕಾಣಲು ಎಷ್ಟು ಕಾತರ! ಆದರೆ ಆ ಕನಸಿಗೊಂದು ಸ್ಪಷ್ಟ ರೂಪ ಕೊಟ್ಟ ಕನಸುಗಾರ ಮಾತ್ರ, ಅದು ಈಡೇರುವ ಮುನ್ನವೇ ನಮ್ಮನ್ನಗಲಿ ಕಾಣದ ಲೋಕಕ್ಕೆ ಪಯಣಿಸಿದ. ಸಾವು ಅನ್ನುವುದು ಹೀಗೂ ಬರಬಹುದಾ? ಮಕ್ಕಳಲ್ಲಿ, ಯುವಕರಲ್ಲಿ ಕನಸುಗಳನ್ನು ಬಿತ್ತಿ, ಕನಸು ಕಾಣುವುದನ್ನು ಹೇಳಿಕೊಡುತ್ತಾ ಸಾಗುತ್ತಿದ್ದ ಕರ್ಮಯೋಗಿಯೊಬ್ಬ ತನ್ನ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡ ಬಗೆಯೋ ಇದು? ಜ್ಞಾನ ಪ್ರಸಾರ ಮಾಡುತ್ತಾ ದೇಶದುಗ್ಗಲಕ್ಕೂ ಓಡಾಡುತ್ತಿದ್ದ ಕಲಾಂ ಮೇಷ್ಟ್ರು, ಪಾಠ ಮಾಡುತ್ತಲೇ ನಮ್ಮನ್ನಗಲಿದರಲ್ಲ? ನಾವು ಪಾಠವನ್ನು ಪೂರ್ತಿ ಅರ್ಥೈಸಿಕೊಳ್ಳುವ ಮೊದಲೇ?

ಮೊನ್ನೆಯಷ್ಟೇ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮ ಮನೆಮಾಡಿತ್ತು. ಆ ಸಂಭ್ರಮಾಚರಣೆಗೆ ತಣ್ಣೀರೆರಚುವಂತೆ ನೆನ್ನೆ ಇಡೀ ದೇಶ ಕಣ್ಣೀರಿನಲ್ಲಿ ಮುಳುಗಿಬಿಟ್ಟಿತು. ಕಲ್ಲವಿಲ್ಲವಾಗಿರುವ ಮನಸ್ಸು ತಹಂಬದಿಗೆ ಬರುತ್ತಲೇ ಇಲ್ಲ. ಬೇಡವೆಂದರೂ ಒಂದು ಗೊಂದಲ, ಗೊಂದಲ ಎನ್ನುವುದಕ್ಕಿಂದ ಒಂದು ಪ್ರಶ್ನೆ ಮನಸ್ಸನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ. ಪ್ರತಿಯೊಂದು ಜೀವವೂ ಅಮೂಲ್ಯವೇ, ಒಪ್ಪೋಣ. ಆದರೆ ಈ ಕೆಲವು ಭ್ರಷ್ಟ ರಾಜಕಾರಣಿಗಳು, ಎಷ್ಟೇ ಸ್ಥಿತಿವಂತರಾಗಿದ್ದರೂ ತಮ್ಮ ಅರೋಗ್ಯ ಹದಗೆಟ್ಟಾಗ ಚಿಕಿತ್ಸೆಗೆ ಸರ್ಕಾರದ, ಜನರ ಹಣ ದುರ್ಬಳಕೆ ಮಾಡಿಕೊಳ್ಳುವ ಮಂತ್ರಿಗಳು, ಸಾರ್ವಜನಿಕವಲಯದಲ್ಲಿದ್ದೂ ಬೇಡದ ದುಶ್ಚಟಗಳನ್ನಂಟಿಸಿಕೊಂಡ ಆದರ್ಶ ವ್ಯಕ್ತಿಗಳು ನಮ್ಮ ಸುತ್ತ ಬಹಳ ಇದ್ದಾರೆ, ಪದೇ ಪದೇ ಅರೋಗ್ಯ ತಪ್ಪುತ್ತಾರೆ ಕೂಡ. ಇನ್ನೇನು ಸಾವಿನ ಮನೆ ಕದ ತಟ್ಟಿದರು ಎನ್ನುತ್ತಿರುವಾಗಲೇ, ಜನರ ಖರ್ಚಿನಲ್ಲಿ ಬಿಟ್ಟಿ ಚಿಕಿತ್ಸೆ ತೆಗೆದುಕೊಂಡು, ಹುಷಾರಾಗಿ ಹಿಂದಿರುಗುತ್ತಾರೆ. ಆದರೆ ನಮ್ಮ ಕಲಾಂ ಸರ್ ಗೆ ಯಾಕೆ ಒಂದೇ ಒಂದು ಅವಕಾಶ ಸಿಗಲಿಲ್ಲ?

ನೆನ್ನೆ ಸಾಯಂಕಾಲ ೭.೩೦ ರ ಹೊತ್ತಿಗೆ "Former President Dr.APJ Abdul Kalaam Hospitalized" ಅನ್ನುವ ಸುದ್ದಿ ಬಂತು. ದೇವರೇ ಅವರ ಆರೋಗ್ಯ ಚನ್ನಾಗಿರಲಪ್ಪ ಎಂದುಕೊಳ್ಳುವಷ್ಟರಲ್ಲೇ "Passed Away" ಅನ್ನುವ ಸುದ್ದಿ.  ಮಂಕು ಬಡಿದಂತಾಗಿದೆ. ಈ ಕ್ಷಣಕ್ಕೂ ನಂಬಲಾಗುತ್ತಿಲ್ಲ. How can he leave us so early? ವಿಷನ್ ೨೦೨೦ ಎಂಬ ಕನಸನ್ನು ಕಟ್ಟಿಕೊಟ್ಟ ಮೇಲೆ, ಅದನ್ನು ಪೂರ್ತಿಮಾಡಿ ತಾನೇ ಹೋಗಬೇಕು? ಹೀಗೆ ಅರ್ಧಕ್ಕೆ ಕೈಬಿಟ್ಟು ಹೇಗೆ ಹೊರಟರು ಅವರು? ಅಷ್ಟಕ್ಕೂ ಸದಾ ಕ್ರಿಯಾಶೀಲನಾದ ಆ ಮನುಷ್ಯನ ಹೃದಯ ಸ್ಥಂಬಿತವಾಯಿತಾದರೂ ಹೇಗೆ?

ಬಹುಶಃ ನಮ್ಮ ಭಾರತೀಯರ ಹಣೆಬರಹವೇ ಇಷ್ಟೇನೋ, ಜನರಿಗೆ ಒಳಿತು ಬಯಸಿ, ಪ್ರೇರೇಪಿಸುವ ಸಾಧಕರೆಲ್ಲರೂ ನೋಡನೋಡುತ್ತಿದ್ದಂತೆಯೇ ಕಣ್ಮರೆಯಾಗುತ್ತಿದ್ದಾರೆ. ಈಗ್ಗೆ ಒಂದೆರಡು ವರ್ಷಗಳ ಕೆಳಗೆ "ಆಜಾದೀ ಬಚಾವೋ" ಅಂದೋಲನದ ರೂವಾರಿ ರಾಜೀವ ದೀಕ್ಷಿತರು ಹೀಗೆ ವೇದಿಕೆಯಲ್ಲೇ ಕುಸಿದು ಬಿದ್ದು ಹಠಾತ್ತನೆ ಕಾಣದ ಲೋಕಕ್ಕೆ ಹೊರಟಾಗ ಇದೇ ಬಗೆಯ ಖಾಲಿತನ ಕಾಡಿತ್ತು. ಆದರೆ ಆ ಖಾಲಿತನವನ್ನು ತುಂಬಿಕೊಡಲು, ಅವರ ಚಿಂತನೆಗಳನ್ನು ಪಸರಿಸಲು, ಅವರು ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಲು ಶಕ್ತರಾದ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ. ಆದರೆ ಕಲಾಂ ಸರ್ ಬಿಟ್ಟು ಹೋದ ಜಾಗ? ಅವರಂತಹ ಕನಸುಗಾರನ, ಧೀ ಶಕ್ತಿಯುಳ್ಳ ಕ್ರಿಯಾಶೀಲ ಮನುಷ್ಯನ ಸ್ಥಳವನ್ನು ಯಾರಾದರೂ ತುಂಬಲು ಸಾಧ್ಯವೇ? ಈಗ ಆವರಿಸಿರುವುದು ಶೂನ್ಯ, ಎಂದಿಗೂ ತುಂಬಲಾರದ, ತುಂಬಿಕೊಳ್ಳದ ಶೂನ್ಯ.

ನಿಮ್ಮನ್ನು ಉಳಿಸಿಕೊಳ್ಳಲಾಗದ ನಾವು ನಿಜವಾಗಿಯೂ ನತದೃಷ್ಟರು ಕಲಾಂ ಸರ್. ನೀವು ಬಿಟ್ಟು ಹೋದ ಜಾಗ ಇನ್ನಾರಿಂದಲೂ ತುಂಬಲು ಸಾಧ್ಯವಿಲ್ಲ . ನೀವು ಬಿತ್ತಿದ ಕನಸುಗಳು ಮಾತ್ರ ಭಾರತೀಯ ಯುವಕರ ಹೃದಯದಲ್ಲಿ ಬೆಚ್ಚಗೆ ಮನೆ ಮಾಡಿರುತ್ತವೆ. ಅವು ಹಾಗೇ ಬೆಚ್ಚಗೆ ಕೂರದೇ, ಸಕ್ರಿಯವಾಗಿ ಸಾಕಾರಗೊಳ್ಳಲಿ ಎಂಬುದೊಂದೇ ಉಳಿದಿರುವ ಆಶಯ.




RIP Sir - Return If Possible

Saturday 13 September 2014

ಏನ ಮಾಡಲಿ?

ಕೆಟ್ಟು ಪಟ್ಟಣ ಸೇರು ಅಂತಾರೆ, ಅದೇನು ಸ್ವಭಾವ  ಕೆಟ್ಟಮೇಲೆ ಪಟ್ಟಣ ಸೇರು, ಅಂತಲೋ ಅಥವಾ ಹಣೆಬರಹ ಕೆಟ್ಟು ಪಟ್ಟಣ ಸೇರು ಅಂತಲೋ ಎಂದು ಯಾವಾಗಲೂ ಯೋಚಿಸುತ್ತಿರುತ್ತೇನೆ, ಉತ್ತರ ಮಾತ್ರ ಸಿಕ್ಕಿಲ್ಲ. ನೀವ್ ಏನೇ ಹೇಳಿ, ಬೆಂಗಳೂರಿನ ಈ ಫಾಸ್ಟ್ ಲೈಫ್ ನನ್ನಂಥವರಿಗಲ್ಲ ಕಣ್ರೀ. ದಿನಾ ಬೆಳಿಗ್ಗೆ ಏಳು, ಸಿಕ್ಕಿದ್ದನ್ನ ಬಾಯಿಗೆ ಹಾಕ್ಕೋ, ಆಫೀಸಿಗೆ ಓಡು. ಎಲ್ಲಿ ಯಾವ್ ಬಸ್ ಕ್ಯಾಚ್ ಮಾಡಿದ್ರೆ ಎರಡನೇ ಬಸ್ ತಪ್ಪೋದಿಲ್ಲ, ಎಲ್ಲಿ ಎಷ್ಟು ಜ್ಯಾಮ್ ಇರಬಹುದು? ತಲೆ ತುಂಬಾ ಇವೇ ಯೋಚನೆಗಳು, ಒಮ್ಮೆ ಕಚೇರಿ ತಲುಪಿ ಪಂಚ್ ಮಾಡಿದ್ರೆ ಏನೋ ಸಮಾಧಾನ, ಆದರೆ ಮತ್ತಲ್ಲಿ ಕೆಲಸದ ಒತ್ತಡ, ಜವಾಬ್ದಾರಿಗಳ ಮಧ್ಯೆ ಮತ್ತೆ ಮನೆ ಯಾವಗಪ್ಪ ಸೇರೋದು ಅನ್ನೋ ಚಿಂತೆ. ಬೆಂಗಳೂರಿನ ಸುಂದರ ಸಂಜೆಯ ಟ್ರಾಫಿಕ್ಕನ್ನು ದಾಟಿ ಮನೆ ಸೇರೋಷ್ಟ್ರಲ್ಲಿ, ಮೈಕೈ ಎಲ್ಲ ಹಣ್ಣಾಗಿ, ಹೊಟ್ಟೆಗೆ ಏನಾದ್ರೂ ದಾರಿ ಮಾಡಿ, ಹಾಸಿಗೆ ಕಂಡ್ರೆ ಸಾಕಪ್ಪಾ ಅನಿಸಿರುತ್ತೆ. ಇದರ ಮಧ್ಯೆ ಓದು, ಬರಹಕ್ಕೆಲ್ಲಿ ಪುರುಸೊತ್ತು? ಹಾಗೂ ಮನಸ್ಸು ಚಡಪಡಿಸುತ್ತೆ, ಏನಾದರೂ ಬರೆಯಲು, ಹೊಸದನ್ನು ಕಲಿಯಲು, ಸಮಯ ಮಾತ್ರ ಸಾಲದು.

ಇದು ನನ್ನೊಬ್ಬಳ ಕಥೆಯಲ್ಲ, ಇಲ್ಲಿರುವ ಎಲ್ಲರೂ ಇದಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಯಾರನ್ನು ನೋಡಿದರೂ ಧಾವಂತ. ನಿಂತುಕೊಂಡು ಮಾತನಾಡಲೂ ಪುರುಸೊತ್ತಿಲ್ಲ. ಎಷ್ಟೋ ಸಲ ಊರಿಗೆ ಹೋಗುವಾಗ, ಬೆಂಗಳೂರನ್ನು ದಾಟಿದ ಕೂಡಲೇ ಸ್ವಚ್ಛ ಗಾಳಿ, ಸುತ್ತ ನೆಮ್ಮದಿಯ ವಾತಾವರಣ, ಏನೋ ಒಂದು ತರಹ ಸ್ವಾತಂತ್ರ್ಯದ ಅನುಭವವಾಗುತ್ತದೆ. ತಿರುಗಿ ಬರುವಾಗ ಈ ಊರನ್ನು ಹೊಕ್ಕ ಕೂಡಲೇ, ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳಿಂದ ಕೂಡಿದ ಯಾವುದೋ ಜೈಲನ್ನು ಹೊಕ್ಕಂತೆ ಅನಿಸುತ್ತಿರುತ್ತದೆ.

ಇರಲಿ ಇದು ನನ್ನ ಅನಿಸಿಕೆ. ಬೆಂಗಳೂರಿನ ಪ್ರಿಯರು ಬೇಸರಿಸುವುದು ಬೇಡ, ಆದರೂ ಇದನ್ನೆಲ್ಲಾ ನೆನೆಸಿದರೆ ನಮ್ಮೂರಿನ ಜೀವನ ಎಷ್ಟು ನೆಮ್ಮದಿಯದ್ದು ಎನಿಸುತ್ತೆ. ಆದರೆ ಏನೂ ಮಾಡಲಾಗದು. ಪಟ್ಟಣ ಸೇರಿದ್ದಾಗಿದೆ. ಓಡಲೇ ಬೇಕು.

                                                                                                                         -  ವಸು
                                         

Sunday 2 March 2014

ವೇದಗಳ ಪ್ರಸ್ತುತತೆ

ಸ್ವಂತ ಬಲದಿಂದ ಒಂದು ನಾಲ್ಕು ಅಕ್ಷರ ಬರೆಯುವಂತೆಯೋ, ಅಥವಾ ಯಾವುದಾದರೂ ಕ್ಷೇತ್ರದಲ್ಲಿ ಸ್ವಲ್ಪ ಗುರುತಿಸಿಕೊಳ್ಳುವಂತಹ ಕೆಲಸವನ್ನು ಮಾಡಿದರೆ ಸಾಕು, ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಂಡು, ತನ್ನನ್ನೂ ಸಾಧಕ, ಜ್ಞಾನಿ ಎಂದು ಸಾರಿಕೊಳ್ಳುವ ಜನರೇ ತುಂಬಿದ್ದಾರೆ, ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ.

ಅಂತಹುದರಲ್ಲಿ, ತಾವು ಅಗಾಧ ಜ್ಞಾನದ ಭಂಡಾರವನ್ನೇ ಜಗತ್ತಿಗೆ ನೀಡಿದ್ದರೂ, ಸಮಗ್ರ ವಿಶ್ವ ಸೃಷ್ಟಿಯ ಬಗೆಗೆ ಅಧ್ಯಯನ ನಡೆಸಿ, ಅದರ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಸಾದರ ಪಡಿಸಿದರೂ, ಎಲ್ಲಿಯೂ ತಮ್ಮ ಹೆಸರನ್ನು ಹಾಕಿಕೊಳ್ಳದ ಮಟ್ಟಿಗೆ ತಮ್ಮ ಅಹಂಕಾರವನ್ನು ಅಳಿಸಿಕೊಂಡಿದ್ದವರು ನಮ್ಮ ಉಪನಿಷತ್ ಋಷಿಗಳು.

ಉಪಲಬ್ಧವಿರುವ, ಶ್ರೀ ಶಂಕರರು ಭಾಷ್ಯ ಬರೆದಿರುವ ಕೆಲವೇ ಕೆಲವು ಉಪನಿಷತ್ತುಗಳಲ್ಲೇ ಇರುವ ಜ್ಞಾನ ಭಂಡಾರವನ್ನು ನೋಡಿದರೆ ಮನುಷ್ಯ ಮಾತ್ರರಿಗೆ ಆಶ್ಚರ್ಯವಾಗುತ್ತದೆ. ಆತ್ಮ, ಪರಮಾತ್ಮ, ಸಾವು ಬದುಕಿನ ಬಗೆಗೆ ಅವರ ವಿಚಾರಗಳು, ತರ್ಕಗಳು, ಸತ್ಯದರ್ಶನದ ಅತ್ಯಂತ ಸೂಕ್ಷ್ಮ ಸ್ತರವನ್ನು ತಲುಪಿದ್ದವು.

ಈಗ ನಾವು, ಆಧುನಿಕ ಜಗತ್ತು, ಮಾನವರು ಕಾಣುತ್ತಿರುವ, ಅಧ್ಯಯನ ನಡೆಸಿ ತಿಳಿದುಕೊಳ್ಳುತ್ತಿರುವ, ವಿಶ್ವ ಸೃಷ್ಟಿ, ರಚನೆಯ ಬಗೆಗಿನ ವಿಚಾರಗಳನ್ನು, ನಮ್ಮ ಋಷಿಗಳು, ಸಾವಿರಾರು ವರ್ಷಗಳ ಹಿಂದೆಯೇ ಸಾರಿದ್ದರು. ಅದನ್ನು ಅರ್ಥೈಸುವಲ್ಲಿ, ಭಾಷೆಯ ತೊಡಕಿನಿಂದ ನಾವು ಹಿಂದೆ ಬಿದ್ದಿರಬಹುದು. ಆದ ಮಾತ್ರಕ್ಕೆ, ಅದರಲ್ಲಿರುವುದೆಲ್ಲಾ ಸುಳ್ಳಿನ ಕಂತೆ ಎಂದು ಬಿಡುವುದು ಎಷ್ಟು ಸರಿ? ಎಟುಕಲಾರದ ದ್ರಾಕ್ಷಿ ಹುಳಿ ಎಂದ ನರಿಯಂತೆ ಕುಳಿತಿದ್ದೇವೆ ನಾವಿಂದು. ಜ್ಞಾನ ವೈಚಾರಿಕತೆಯ ಅತ್ಯುನ್ನತ ಮಟ್ಟ ತಲುಪಿದ್ದ ಪೂರ್ವಜರ ಹಿನ್ನೆಲೆಯಿದ್ದೂ ಜ್ಞಾನಕ್ಕಾಗಿ ಬೇರೆಡೆ ನೋಡುತ್ತಿದ್ದೇವೆ. ಸ್ಥೂಲವಾಗಿ ಹೇಳುವುದಾದರೆ, ವಿಶ್ವವಿದ್ಯಾಲಯದ ಮಟ್ಟದಲ್ಲಿದ್ದವರು, ಹಿನ್ನಡೆಯುತ್ತಾ ಪ್ರಾಥಮಿಕ ಶಾಲಾ ಸ್ಥರಕ್ಕಿಂತಲೂ ಕೆಳಕ್ಕಿಳಿದಿದ್ದೇವೆ.

ಸಂಸ್ಕೃತ ಸಾಹಿತ್ಯ ಲೋಕ ವೇದಗಳನ್ನು ಅಪೌರುಷೇಯ, ಹಿಂದಿನಿಂದಲೂ ಅಂದರೆ ಮಾನವನ ಜನ್ಮಕ್ಕೂ ಮೊದಲಿನಿಂದಲೂ ಅವುಗಳಿದ್ದವು, ಮಾನವನ ಅಳಿವಿನ ನಂತರವೂ ಅವು ಇರುತ್ತವೆ ಎಂದು ಸಾರುತ್ತದೆ. ಇದನ್ನು ಪ್ರಶ್ನಿಸುತ್ತಾ ಕೆಲವರು, ಅದು ಹೇಗೆ ಮನುಷ್ಯ ಹುಟ್ಟುವುದಕ್ಕೂ ಮೊದಲು ವೇದಗಳಿರಲು ಸಾಧ್ಯ, ಏನು ತಾನೇ ತಾನಾಗಿ ಶೂನ್ಯದಿಂದ ಉಧ್ಭವಿಸಿದವೊ? ಎಂದೆಲ್ಲ ತಮ್ಮ ಅಭಿಪ್ರಾಯ ಮಂಡಿಸಿ, ಭಾರತೀಯ ತತ್ವಗಳೆಲ್ಲ ಮಿಥ್ಯೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಿ ಬಿಡುತ್ತಾರೆ. ಇನ್ನು ಈ ವೈದಿಕ ವಿದ್ಯೆಯನ್ನು ಮುಂಚಿನಿಂದಲೂ ಕಾಪಿಟ್ಟುಕೊಂಡು, ಅಕ್ಷರಶಃ ಅದನ್ನು ಅಭ್ಯಸಿಸಿರುವ ಜನಾಂಗ, ಅರ್ಥೈಸಿಕೊಳ್ಳುವ ಗೋಜಿಗೆ ಹೋಗದೇ, ಇದೊಂದು ದೈವಿಕ ವಾಣಿ ಎಂದು ಪೂಜಿಸುತ್ತಾ, ಒಂದರ್ಥದಲ್ಲಿ ಮೂಲೆಗುಂಪು ಮಾಡಿದೆ. ಹೆಣ್ಣುಮಕ್ಕಳಿಗೆ, ಶೂದ್ರರಿಗೆ ವೇದಾಧ್ಯಯನವಿಲ್ಲ ಎಂಬ ಮೂಢ ನಂಬಿಕೆ ಇಂದಿಗೂ ನಮ್ಮ ಸಮಾಜದಲ್ಲಿದೆ. ಆಹ್! ವಿಷಯಾಂತರವಾಯಿತು, ವೇದಗಳ ಪ್ರಸ್ತುತತೆಯ ಬಗ್ಗೆ ಹೇಳುತ್ತಿದ್ದೆ.

ಮೂಲ ತಪ್ಪಾಗಿರುವುದು, ವೇದ ಎಂಬ ಶಬ್ಧವನ್ನು ಎಲ್ಲರೂ ಅರ್ಥೈಸಿರುವ ರೀತಿಯಲ್ಲಿ. ವೇದ ಎಂಬುದು ಯಾವುದೋ ಒಂದು ಗ್ರಂಥದ ಹೆಸರಲ್ಲ. ವೇದ ಎಂದರೆ ಜ್ಞಾನ, ತಿಳುವಳಿಕೆ ಎಂದರ್ಥ. ಜ್ಞಾನದ ಅಭಿವ್ಯಕ್ತಿ ಯಾವುದೇ ರೀತಿಯಿಂದ ಆಗಬಹುದು. ನಮ್ಮ ಪೂರ್ವಜರು ಸಾಧನೆಯಿಂದ ಈ ಜ್ಞಾನದ ಅತ್ಯುತ್ತಮ ಸ್ತರವನ್ನು ತಲುಪಿದ್ದರು. ತಾವು ಕಂಡುಕೊಂಡಿದ್ದನ್ನು ಅವರು ತಾವು ಬಳಸುತ್ತಿದ್ದ ಸಂಸ್ಕೃತ ಭಾಷೆಯ ಮೂಲಕ ಜಗತ್ತಿಗೆ ತಿಳಿಸಿದರು. ಕೆಲವನ್ನು ಗದ್ಯ ರೂಪದಲ್ಲಿ ಮತ್ತು ಕೆಲವನ್ನು ಛಂದೋಬದ್ಧವಾಗಿ ಹಿಡಿದಿಟ್ಟರು. ಹೀಗೆ ಜ್ಞಾನ ಹೊರಸೂಸಿದ ರೂಪಕ್ಕನುಗುಣವಾಗಿ ಅವಕ್ಕೆ ಸಂಹಿತೆ, ಬ್ರಾಹ್ಮಣಕ, ಆರಣ್ಯಕ, ಉಪನಿಷತ್ತುಗಳೆಂಬ ಹೆಸರು ಕೊಟ್ಟರು. ಇದರರ್ಥವಿಷ್ಟೇ, ನಾವಿಂದು ಪವಿತ್ರ ಎಂದು ಪೂಜಿಸುತ್ತಾ ಬಂದಿರುವ ಸಾಹಿತ್ಯ ನಮ್ಮ ಪೂರ್ವಜರ ದರ್ಶನವಷ್ಟೇ...

ಇದರಲ್ಲಿ ಸುಳ್ಳುಗಳು, ಮಿಥ್ಯಾ ನಂಬಿಕೆಗಳು ಇರಬಹುದು. ಆದರೆ ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎನ್ನುವುದು ತಪ್ಪು. ಬೆಳೆ ಅಂದಮೇಲೆ  ಜೊಳ್ಳೂ ಇರುತ್ತದೆ, ಗಟ್ಟಿ ಕಾಳೂ ಇರುತ್ತದೆ, ಬೇರೆ ಮಾಡಿ ಪಡೆಯುವ ತಾಳ್ಮೆ, ಜಾಣ್ಮೆ ನಮ್ಮಲ್ಲಿರಬೇಕಷ್ಟೇ.